
ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಾಲಕ ಬಾಲಕಿಯರ ಪ್ರೌಢಶಾಲೆಯಲ್ಲಿ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಲ್ಲಿ ತಾರತಮ್ಯ: ರಾಜಶೇಖರ್ ಸೋಸಲೆ
ಟಿ.ನರಸೀಪುರ ತಾ!!: ಮೈಸೂರು ಜಿಲ್ಲೆ: ಟಿ ನರಸೀಪುರ ಪಟ್ಟಣದಲ್ಲಿರುವ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ರೋಸ್ಟರ್ ಪದ್ದತಿ ಅನುಸರಿಸದೇ ಎಸ್ಸಿ/ಎಸ್ಟಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳದಿರುವುರಿಂದ ಅಸ್ಪೃಶ್ಯತೆಯನ್ನು ಬಲಪಡಿಸುತ್ತಾ ಜೀವಂತಗೊಳಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಟ್ಟಣದಲ್ಲಿರುವ ವಿದ್ಯೋದಯ ಶಿಕ್ಷಣ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ಅಡುಗೆ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಸರ್ಕಾರ ಮಾಡಿರುವ ಸುತ್ತೋಲೆಯ ಇಲಾಖೆಯ ನಿಯಮವನ್ನು ಉಲ್ಲಂಘಿಸಿರುವ ಮುಖ್ಯ ಶಿಕ್ಷಕರುಗಳು ಹಾಗೂ ಎಲ್ಲಾ ವಿಷಯ ಗೊತ್ತಿದ್ದು ಗೊತ್ತಿಲ್ಲದಂತೆ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಭಾರತ ಸರ್ಕಾರವು ಪಿಎಂ ಪೋಷಣ್ ಯೋಜನೆ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳ ಪೌಷ್ಠಿಕಾಂಶವುಳ್ಳ ಮಧ್ಯಾಹ್ನದ ಬಿಸಿ ಊಟ ಹೊದಗಿಸಿದ್ದು ಎಲ್ಲಾ ವರ್ಗದ ಮಕ್ಕಳು ಬಿಸಿ ಊಟದಲ್ಲಿ ಪಾಲ್ಗೊಂಡು ಸಹಪಂಕ್ತಿ ಭೋಜನದ ಮೂಲಕ ಸಮಾನತೆಯನ್ನು ತರುವಂತಹ ಕಾರ್ಯಕ್ರಮ ಇದಾಗಿರುತ್ತದೆ.ಆದರೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರೇ ವಿದ್ಯಾರ್ಥಿಗಳಲ್ಲಿ ಜಾತಿ ವೈಷ್ಯಮ್ಯ ವಿಷಬೀಜ ಬಿತ್ತುವ ಮೂಲಕ ವಿದ್ಯಾರ್ಥಿ ದಿಸೆಯಿಂದಲೇ ಜಾತಿ,ಬೇಧ ಭಾವನೆ ಮೂಡಿಸುತ್ತಿರುವುದು ನಾಚಿಕಗೇಡಿತನದ ವಿಷಯವಾಗಿದ್ದು ಇಂತಹ ಶಿಕ್ಷಕರ ಮೇಲೆ ಅಸಹ್ಯ ಮೂಡಿಸುತ್ತದೆಂದರು.
ಮುಖಂಡ ಬಿ.ಎಂ.ನವೀನ್ ಮಾತನಾಡಿ ವಿದ್ಯೋದಯ ಶಾಲೆಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಕೆಲಸಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದು ಪ್ರಶ್ನೆ ಮಾಡಿದಾಗ ಗ್ರಂಥಪಾಲಕರು ನಮಗೆ ಬೆದರಿಕೆ ಹಾಕಿ ಅಸ್ಪೃಶ್ಯ ಸಮಾಜದ ಅಡುಗೆಯವರು ಅಡುಗೆ ಮಾಡಿದರೆ ಮಕ್ಕಳು ಊಟ ಮಾಡುವುದಿಲ್ಲವೆಂದು ತಿಳಿಸಿದಾಗ ನಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆವು.ಆಗ ಅವರನ್ನು ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿರುತ್ತಾರೆಂದು ತಿಳಿಸಿ ಅದರ ಪ್ರತಿಯನ್ನು ತೋರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲೆಯ ವಿರುದ್ಧ ಅನೇಕ ಭಾರಿ ದೂರು ನೀಡಿದ್ದರೂ ಶಾಲೆಯ ವಿರುದ್ಧ ಯಾವ ಕ್ರಮಕ್ಕೂ ಮುಂದಾಗದೇ,ಸರ್ಕಾರದ ಗಮನಕ್ಕೂ ತಾರದೆ ಈ ಶಾಲೆಯಲ್ಲಿ ನಡೆಯತ್ತಕ್ಕಂತಹ ನಿರ್ವಹಣೆಗೆ ಒತ್ತು ನೀಡುತ್ತಾ ಅಧಿಕಾರ ದುರುಪಯೋಗ ಪಡಿಸಿಕೊಂಡಿರುತ್ತಾರೆ.ಕೆಲವು ಶಾಲೆಗಳಲ್ಲಿ ಅಡ್ಡ ನಿಯೋಜನೆಗಳನ್ನು ಮಾಡಿ ಶೈಕ್ಷಣಿಕ ಗುಣಮಟ್ಟ ಕುಸಿಯುವಂತೆ ಮಾಡುತ್ತಿದ್ದು ಇಂತಹ ಅಧಿಕಾರಿಯ ಕರ್ತವ್ಯ ಲೋಪ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕರನ್ನು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬನ್ನಹಳ್ಳಿ ಚಂದ್ರಶೇಖರ್, ಅತ್ತಹಳ್ಳಿ ರವಿ,ಕರೋಹಟ್ಟಿ ಮಹೇಂದ್ರ,ಸೋಸಲೆ ನಾರಾಯಣ್,ಬೂದಹಳ್ಳಿ ನಂಜುಂಡ ಇದ್ದರು.

