
ಬೆಂಗಳೂರು:ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ
ಬೆಂಗಳೂರಿನಲ್ಲಿ ವಾರದಲ್ಲಿ ಎರಡು ದಿನ ಪೊಲೀಸರ ವಿಶೇಷ ಕಾರ್ಯಾಚರಣೆ : ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು : ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದ್ದು, ವಾರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ನಡೆಸಿದ ರಾಣಿ ಚೆನ್ನಮ್ಮ ಪಡೆ-ಮಹಿಳಾ ಜಾಗೃತಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾರ್ವಜನಿಕರಲ್ಲಿ ಸ್ಥೈರ್ಯ ಮೂಡಿಸಲು ನಗರಾದ್ಯಂತ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲಿಸುತ್ತಿದ್ದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ದಾಖಲೆ ಇಲ್ಲದ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಜನಸ್ನೇಹಿಯಾಗಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಗಸ್ತು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸೀಮಂತ್‍ಕುಮಾರ್ ಸಿಂಗ್ ಹೇಳಿದರು.
ಪ್ರತಿ ಮಂಗಳವಾರ ಹಾಗೂ ಗುರುವಾರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಏರಿಯಾವನ್ನು ಡೊಮಿನೇಷನ್ ಮಾಡಲು, ರಾತ್ರಿ 9 ಗಂಟೆಯಿಂದ 11 ಗಂಟೆಯ ಅಂತರದಲ್ಲಿ ತಪಾಸಣೆ ಮಾಡುವಂತೆ, ಪರಿಶೀಲನೆ ವೇಳೆ ಮಹಿಳೆಯರು ಮತ್ತು ಮಕ್ಕಳ ನಡುವೆ ಒಳ್ಳೆಯ ರೀತಿ ವರ್ತಿಸುವಂತೆ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಸೂಚಿಸಿದ್ದಾರೆ.

