
ಜೂನ್ 21 : ಯೋಗ ದಿನಾಚರಣೆಯ ಶುಭಾಶಯಗಳು: ಪ್ರಬುದ್ಧ ಕರ್ನಾಟಕ ನ್ಯೂಸ್ 24
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಇದೊಂದು ಪ್ರಾಚಿನ ಕಲೆಯಾಗಿದ್ದು, 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವಾಗಿರುತ್ತದೆಯೋ ಅಷ್ಟೇ ಆಂತರಿಕ ಸೌಂದರ್ಯ, ಆರೋಗ್ಯ ಎರಡು ಕೂಡ ಬಹಳ ಅವಶ್ಯಕವಾಗಿರುತ್ತದೆ. ಇವೆರಡನ್ನು ಸಮನಾಗಿ ಇಟ್ಟುಕೊಳ್ಳುವುದಕ್ಕೆ ಯೋಗ ಸಹಾಯ ಮಾಡುತ್ತದೆ. ಪ್ರತಿನಿತ್ಯ ತಪ್ಪದೆ ಯೋಗ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಯೋಗದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಅವರು ಕರಡು ಪ್ರಸ್ತಾವನೆಯನ್ನು ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. ಬಳಿಕ 2015 ಜೂನ್ 21ರಂದು ರಾಜಪಥದಲ್ಲಿ ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಮಾಡಿದ್ದರು.ವರ್ಷದ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಮತ್ತು ಉತ್ತರ ಗೋಳಾರ್ಧದ ಅತಿ ಉದ್ದದ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾತಿ ದಿನವೆಂದು ಅಂದರೆ ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದ್ದು, ಈ ದಿನ ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ಹಾಗಾಗಿ ಯೋಗ ಆರಂಭ ಮಾಡುವವರಿಗೆ ಈ ದಿನ ಬಹಳ ಪ್ರಶಸ್ತ ಎಂದು ನಂಬಲಾಗಿದೆ.


