ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ 3 ಕೋಟಿ ಮೌಲ್ಯದ 100 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಂಗ್ರಹಿಸಿದ್ದ ಕೇರಳ ಮೂಲದ ಆರೋಪಿ ಸಚಿನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಾದ ರಾಶಿ, ಸಂಜು ಮತ್ತು ಉಮೇದ್ ಪರಾರಿಯಾಗಿದ್ದಾರೆ. ಆರೋಪಿ ಸಚಿನ್ ಕೂಡ ಮೊದಲ ಮಹಡಿಯಿಂದ ಹಾರಿ ಪರಾರಿಯಾಗಲು ಯತ್ನಿಸಿದನು. ಆದರೆ, ಕಾಲು ಮುರಿದು ಕುಸಿದು ಬಿದ್ದಿದ್ದಾನೆ. ಗಾಯಾಳು ಆರೋಪಿ ಸಚಿನ್ನನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಠಾಣೆ ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ಶೋಧ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಹೊರರಾಜ್ಯಗಳಿಂದ ಗಾಂಜಾ ತರಿಸಿ, ಅಪಾರ್ಟ್ಮೆಂಟ್ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡುತ್ತಿದ್ದರು. ಬಳಿಕ ಆರೋಪಿಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇದ್ದ ಕೊಠಡಿಯಲ್ಲಿ ವೇಯಿಂಗ್ ಸ್ಕೇಲ್, ಪ್ಯಾಕಿಂಗ್ ಟೇಪ್, ರಾಶಿ ರಾಶಿ ಗಾಂಜಾ ಪಾಕೇಟ್ಗಳು ಪತ್ತೆಯಾಗಿವೆ. ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ 1 ತಿಂಗಳಲ್ಲಿ ಡ್ರಗ್ ಕೇಸ್ನಲ್ಲಿ 59 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಬಳಿ ಇದ್ದ 208 ಕೆಜಿ ಗಾಂಜಾ, 22 ಗ್ರಾಂ ಹೆರಾಯಿನ್, 1 ಕೆಜಿ ಎಂಡಿಎಂಎ, 32 ಟೈಡಲ್ ಮಾತ್ರೆಗಳು ವಶಪಡಿಸಿಕೊಂಡಿದ್ದಾರೆ.