ಸುದ್ದಿ

ಗೌರಿಬಿದನೂರಿನಲ್ಲಿ ವಕೀಲರ ಮೇಲೆ ಚಾಕು ಹಿರಿತ ಕುತ್ತಿಗೆಗೆ ತೀವ್ರ ಗಾಯ ಸ್ಥಿತಿ ಚಿಂತಾ ಜನಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ

Share It

ಗೌರಿಬಿದನೂರು ನಗರದಲ್ಲಿ ವಕೀಲರ ಮೇಲೆ ಚಾಕುವಿನಿಂದ ಕುತ್ತಿಗೆಗೆ ಹಿರಿದು ಹಲ್ಲೆ.

ಗೌರಿಬಿದನೂರಿನಲ್ಲಿ ವಕೀಲರ ಮೇಲೆ ಚಾಕು ಇರಿತ.
ಕುತ್ತಿಗೆಗೆ ತೀವ್ರ ಗಾಯ, ಸ್ಥಿತಿ ಚಿಂತಾಜನಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ.

ಗೌರಿಬಿದನೂರು: ನಗರದ ಹೃದಯಭಾಗದಲ್ಲಿರುವ ಗಾಂಧಿ ವೃತ್ತದ ಸಮೀಪ ಹಿರಿಯ ವಕೀಲರ ಮೇಲೆ ಹಾಡಹಗಲೇ ಚಾಕುವಿನಿಂದ  ಕುತ್ತಿಗೆಗೆ ಹಿರಿದು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಸಬಾ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡದಲ್ಲಿರುವ ತಮ್ಮ ಕಚೇರಿಗೆ ಆಗಮಿಸುತ್ತಿದ್ದ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಿಂದ ವಕೀಲರ ವಲಯದಲ್ಲಿ ಆತಂಕ ಮನೆಮಾಡಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ಎಂದಿನಂತೆ ಕರ್ತವ್ಯ ನಿರ್ವಹಿಸಲು ವೆಂಕಟರಮಣಪ್ಪ ಅವರು ಕಚೇರಿಗೆ ಆಗಮಿಸಿದ್ದರು. ಕಟ್ಟಡದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಮೆಟ್ಟಿಲುಗಳ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದ ಪರಿಣಾಮ ತೀವ್ರ ಗಾಯಗೊಂಡು ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ.
ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ, ಗಾಯಾಳುವನ್ನು ಆಟೋ ಮೂಲಕ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ದುಷ್ಕರ್ಮಿ ಡಿಯೋ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದು, ಕಟ್ಟಡದ ಕೆಳಭಾಗದಲ್ಲಿ ವಾಹನ ನಿಲ್ಲಿಸಿ ವಕೀಲರಿಗಾಗಿ ಕಾಯುತ್ತಿದ್ದ ಎನ್ನಲಾಗಿದೆ. ವಕೀಲರು ಕಚೇರಿಯತ್ತ ಬರುತ್ತಿದ್ದಂತೆ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ದಾಳಿಯ ಬಳಿಕ ಚಾಕುವನ್ನು ಸಮೀಪದ ತಾಲ್ಲೂಕು ಆರೋಗ್ಯ ಇಲಾಖೆಯ ಕಚೇರಿ ಆವರಣದ ಕಡೆ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಜಗನ್ನಾಥ ರೈ ಹಾಗೂ ಗೌರಿಬಿದನೂರು ನಗರ ಠಾಣೆಯ ಪಿಎಸ್ಐ ವರಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಮತ್ತು ಆಸ್ಪತ್ರೆಯ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಹಾಗೂ ಸಾರ್ವಜನಿಕರು ಜಮಾಯಿಸಿದ್ದು . ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ನಗರದ ಪ್ರಮುಖ ವಾಣಿಜ್ಯ ಹಾಗೂ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದಿರುವ ಈ ದಾಳಿ ವಕೀಲರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಕೀಲರ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಶೀಘ್ರ ಬಂಧಿಸಿ, ಘಟನೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಕು ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.