ಸುದ್ದಿ

ಚಾಕುವಿನಿಂದ ದಾಳಿ ದೇಹವಿಡಿ ರಕ್ತ ಆದರೂ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್ :ಸ್ಮಿತ್ ಮಚ್ಚಾರ್

Share It

ದುಬೈ–ಟೆಲ್ ಅವೀವ್ ವಿಮಾನದಲ್ಲಿ ಪೈಲಟ್ ಮೇಲೆ ದಾ*: ತಪ್ಪಿದ ಭಾರೀ ದುರಂತ, ಭಾರತೀಯ ಕ್ಯಾಪ್ಟನ್ ಸಾಹಸಕ್ಕೆ ಪ್ರಶಂಸೆ

ದುಬೈ, ಅಕ್ಟೋಬರ್ 1: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಸಂಸ್ಥೆಯ ಎಫ್‌ಝೆಡ್ 1073 ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ದಾ*ಯು ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಸೆಪ್ಟೆಂಬರ್ 30ರಂದು ನಡೆದ ಈ ಘಟನೆಯ ಬಳಿಕ, ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ಇಸ್ರೇಲ್ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಸಹಪೈಲಟ್ ವಿಮಾನದ ಕ್ಯಾಪ್ಟನ್ ಮೇಲೆ ಇರಿತದ ದಾ* ನಡೆಸಿ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂಬ ಆರೋಪವಿದೆ. ಗಂಭೀರವಾಗಿ ಗಾಯಗೊಂಡಿದ್ದರೂ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಪ್ರತಿರೋಧ ತೋರಿ ಕಾಕ್‌ಪಿಟ್ ಬಾಗಿಲು ತೆರೆಯಲು ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಪ್ರವೇಶಿಸಿ, ಆರೋಪಿಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ವಿಮಾನ ಏಕಾಏಕಿ ಎತ್ತರ ಕಳೆದುಕೊಂಡಿದ್ದರಿಂದ ಪ್ರಯಾಣಿಕರು ಭಯಭೀತರಾದರು. ಅದೇ ವಿಮಾನದಲ್ಲಿದ್ದ ಫ್ಲೈದುಬೈನ ಇತರ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು ಸುರಕ್ಷಿತವಾಗಿ ಇಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನದಲ್ಲಿ 174 ಮಂದಿ ಇದ್ದುದಾಗಿ ನೆತನ್ಯಾಹು ತಿಳಿಸಿದ್ದಾರೆ. ಬಳಿಕ ಪ್ರಯಾಣಿಕರನ್ನು ಪರ್ಯಾಯ ವಿಮಾನದ ಮೂಲಕ ಟೆಲ್ ಅವೀವ್‌ಗೆ ಕರೆದೊಯ್ಯಲಾಯಿತು.

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1ರಂದು ಶ್ಲಾಘಿಸಿದ್ದಾರೆ. ತೀವ್ರ ಅಪಾಯ ಎದುರಾದಾಗಲೂ, ಗಾಯಗೊಂಡಿದ್ದರೂ ಇತರರ ಜೀವ ರಕ್ಷಣೆಗೆ ಅವರು ತೋರಿದ ಸಂಕಲ್ಪವನ್ನು ಮೆಚ್ಚಿಕೊಂಡಿದ್ದಾರೆ. ಕ್ಯಾಪ್ಟನ್ ಅವರ ಸಾಹಸದ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ತಿಳಿಸಿರುವ ಮೋದಿ, ಅವರು ಶೀಘ್ರ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.

ಈ ಮಧ್ಯೆ, ಘಟನೆಯ ಕುರಿತು ತನಿಖೆ ನಡೆಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಟಾರ್ನಿ ಜನರಲ್ ವಿಶೇಷ ಅಭಿಯೋಜಕರ ತಂಡ ರಚಿಸುವಂತೆ ಆದೇಶಿಸಿದ್ದಾರೆ. ಕಾಕ್‌ಪಿಟ್‌ನಲ್ಲಿ ಸಂಘರ್ಷ ಸಂಭವಿಸಿದ್ದು, ವಿಮಾನದಲ್ಲಿದ್ದ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಮಾನವನ್ನು ಸುರಕ್ಷಿತಗೊಳಿಸಿದರು ಎಂದು ಫ್ಲೈದುಬೈ ತಿಳಿಸಿರುವುದನ್ನು ಯುಎಇ ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.

ಘಟನೆಯ ಹಿಂದಿನ ಉದ್ದೇಶ, ಪೂರ್ವಯೋಜನೆ ಇತ್ತೇ ಮತ್ತು ಭಯೋ*ದಕ ಚಟುವಟಿಕೆಯೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬ ಅಂಶಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ಈ ಅಂಶಗಳು ಇನ್ನೂ ದೃಢಪಟ್ಟಿಲ್ಲ; ತನಿಖೆ ಮುಂದುವರಿದಿದೆ. ಅಧಿಕೃತ ತನಿಖೆ ಪೂರ್ಣಗೊಳ್ಳುವವರೆಗೆ ಊಹಾಪೋಹಗಳು ಹಾಗೂ ಪರಿಶೀಲಿಸದ ಮಾಹಿತಿಯನ್ನು ಹರಡದಂತೆ ಯುಎಇ ಅಧಿಕಾರಿಗಳು ಮನವಿ ಮಾಡಿದ್ದಾರೆ.